ಮಿಲಿಂದ -
 	ಇಂಡೋಗ್ರೀಕ್ ರಾಜರಲ್ಲಿ ಪ್ರಸಿದ್ಧನಾದವ. ಕ್ರಿ. ಪೂ. 160-140ರ ತನಕ ಇವನ ರಾಜ್ಯಭಾರ ನಡೆಯಿತು ಎನ್ನಲಾಗಿದೆ. ಗ್ರೀಕ್ ಬರೆಹಗಾರರು ಈತನನ್ನು ಮೆನಾಂಡರ್ ಎಂದೂ ಕ್ಷೇಮೇಂದ್ರನ ಅವಧಾನಕಲ್ಪತಾದಲ್ಲಿ ಮಿಲೀಂದ್ರನೆಂದೂ ಕರೆಯಲಾಗಿದೆ. ಬೌದ್ಧಸನ್ಯಾಸಿ ನಾಗಸೇನನ ಮಿಲಿಂದಪನ್ಹ (ನಾಗಸೇನನೊಡನೆ ಮಿಲಿಂದ ನಡೆಸಿದ ಸಂಭಾಷಣೆ ಇರಬಹುದಾದ ಮಿಲಿಂದನ ಪ್ರಶ್ನೆಗಳು) ಎಂಬ ಗ್ರಂಥದಲ್ಲಿಯೂ ಮತ್ತು ಮಿಲಿಂದನ ಕಾಲದ ಖರೋಷ್ಠಿ ಶಾಸನಗಳಿಂದಲೂ ಈತನ ವಿಷಯ ತಿಳಿದುಬರುತ್ತದೆ. ಈತನ ರಾಜ್ಯ ಅಘ್ಫಾನಿಸ್ತಾನದ ಕೆಲವು ಭಾಗಗಳನ್ನೂ ಪಂಜಾಬ್, ಸಿಂಧ್ ಮತ್ತು ಕಾಥೇವಾಡದ ಕೆಲವು ಭಾಗಗಳನ್ನೂ ಒಳಗೊಂಡಿತ್ತೆಂದು ತಿಳಿದುಬರುವುದು. ಈತ ಅಚ್ಚುಹಾಕಿಸಿದ ನಾಣ್ಯಗಳು ಈ ಪ್ರದೇಶಗಳಲ್ಲಿ ಸಿಕ್ಕಿವೆ. ಪಂಜಾಬಿನ ಸೀಯಾಲ್ ಕೋಟ್ ಈತನ ರಾಜಧಾನಿಯಾಗಿತ್ತು. ಬೌದ್ಧಮತೀಯ ಗ್ರಂಥಗಳಿಂದ ಮಿಲಿಂದ ಬೌದ್ಧಮತದ ಪೋಷಕನೂ ವಿದ್ವಾಂಸನೂ ಆಗಿದ್ದನೆಂದು ತಿಳಿದುಬರುತ್ತದೆ. ತನ್ನ ಕೊನೆಗಾಲದಲ್ಲಿ ಸಿಂಹಾಸನವನ್ನು ತ್ಯಾಗಮಾಡಿ ಬೌದ್ಧಸನ್ಯಾಸಿಯಾದನೆಂಬ ಪ್ರತೀತಿ ಇದೆ. ಹಾಗೆಯೇ ಈತ ಮಧ್ಯ ಏಷ್ಯದ ಕಾಕಸಸ್ ಪ್ರಾಂತ್ಯದಲ್ಲಿ ಜನಸಿದವ. ಆದರೂ ಗ್ರೀಕ್ ಜೀವನಚರಿತ್ರಕಾರ ಪ್ಲೂಟಾರ್ಕ್ ಈತನನ್ನು ಬ್ಯಾಕ್ಟ್ರಿಯದ ದೊರೆಯೆಂದು ಹೇಳಿದರೆ, ಗ್ರೀಕ್ ಭೂಗೋಳಕಾರ ಮತ್ತು ಚರಿತ್ರೆಕಾರ ಸ್ಟ್ರಾಬೊ ಬ್ಯಾಕ್ಟ್ರಿಯನ್ ಗ್ರೀಕ್ ದೊರೆಗಳ ಸಾಲಿಗೆ ಸೇರಿಸಿದ್ದಾನೆ. ಇದರಿಂದ ಈಗ ಬ್ಯಾಕ್ಟ್ರಿಯವನ್ನು ಆಳಿರಬಹುದೆಂದೂ ಪಾರ್ಥಿಯನ್ನರ ವಿರುದ್ಧ ಎರಡನೆಯ ಡೆಮಿಟ್ರಿಯಸ್ಸನಿಗೆ ಸಹಾಯ ಮಾಡಿರಬಹದೆಂದೂ ಹೇಳುತ್ತಾರೆ. ಈತನ ಕಾಲದ ವಿಚಾರವಾಗಿ ಭಿನ್ನಾಭಿಪ್ರಾಯಗಳಿವೆ.				
(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ